ನವದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತಾ ನಗರಗಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಾದೇಶಿಕ ನ್ಯಾಯಪೀಠಗಳನ್ನು ಸ್ಥಾಪಿಸಲು ಸಂವಿಧಾನದ 130ನೇ ವಿಧಿಗೆ ತಿದ್ದುಪಡಿ ತರುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯಸಭಾ ಸದಸ್ಯರೂ, ಹಿರಿಯ ವಕೀಲರೂ ಅದ ಪಿ ವಿಲ್ಸನ್ ಅವರು ಕೇಂದ್ರ ಕಾನೂನು ಸಚಿವರಾದ ಆರ್ ಎಸ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಮೊಕದ್ದಮೆಗಳ ವಿಚಾರಣೆಯನ್ನು ವೇಗವಾಗಿ ನಿಭಾಯಿಸಲು ನ್ಯಾಯಾಧೀಶರ ಗಣತಿಯನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ನ್ಯಾಯಪೀಠಗಳನ್ನು ಸ್ಥಾಪಿಸಲು ಕೋರಿಕೆ ಸಲ್ಲಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 1956ರಲ್ಲಿ 8 ನ್ಯಾಯಾಧೀಶರನ್ನು ಹೊಂದಿದ್ದ ಸರ್ವೋಚ್ಚ ನ್ಯಾಯಾಲಯ ನಂತರ 11ಕ್ಕೆ ಹೆಚ್ಚಿಸಿತು. 1960ರಲ್ಲಿ 11ರಿಂದ 14ಕ್ಕೆ, 1977ರಲ್ಲಿ 14ರಿಂದ 17ಕ್ಕೆ, 1986ರಲ್ಲಿ 17ರಿಂದ 26ಕ್ಕೆ, ಮತ್ತು 2008ರಲ್ಲಿ 26ರಿಂದ 31ಕ್ಕೆ ತನ್ನ ನ್ಯಾಯಾಧೀಶರ ಗಣತಿಯನ್ನು ಏರಿಸುತ್ತಾ ಬಂದಿತು. ಆದರೆ ಈ ಸಮಸ್ಯೆಯನ್ನು ವಿಶ್ಲೇಷಿಸಿ ನೋಡಿದಾಗ ಕೇವಲ ಹೆಚ್ಚಿನ ನ್ಯಾಯಾಧೀಶರನ್ನು ನೇಮಿಸುವುದರಿಂದ ಮೊಕದ್ದಮೆಗಳ ವಿಚಾರಣೆಯ ವೇಗವನ್ನು ಹೆಚ್ಚಿಸಲು ಆಗುವುದಿಲ್ಲ ಎಂದು ತಿಳಿಯುತ್ತದೆ. ನ್ಯಾಯಾಧೀಶರು ಹೆಚ್ಚಿದಂತೆ ಒಂದೊಂದು ಪ್ರಕರಣದ ವಿಚಾರಣೆಗೆ ಮೊದಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಮೊಕದ್ದಮೆಗಳ ವಿಲೇವಾರಿಯಲ್ಲಿ ಹೆಚ್ಚೇನೂ ವ್ಯತ್ಯಾಸ ಆಗುವುದಿಲ್ಲ.
ಸರ್ವೋಚ್ಚ ನ್ಯಾಯಾಲಯದ ಕಾರ್ಯವಿಧಾನದ ಮೂಲಭೂತ ರಚನೆಯೇ ಹಲವಾರು ವಿಳಂಬಗಳಿಗೆ ಕಾರಣವಾಗುತ್ತಿದ್ದರೂ ಅದನ್ನು ಸರಿಪಡಿಸುವ ಬಗ್ಗೆ ಈವರೆಗೂ ಗಮನ ಹರಿಸಲಾಗಿಲ್ಲ. ಆ ಪೈಕಿ ಮೊಟ್ಟಮೊದಲನೆಯದು ಸರ್ವೋಚ್ಚ ನ್ಯಾಯಾಲಯದ ಮೊಕದ್ದಮೆಗಳ ವ್ಯಾಪ್ತಿ – ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ (ಸಾಂವಿಧಾನಿಕ) ಮೊಕದ್ದಮೆಗಳ ವಿಚಾರಣೆ ನಡೆಸುವುದಲ್ಲದೆ ಭಾರತದಲ್ಲಿ ಎಲ್ಲಾ ಮೊಕದ್ದಮೆಗಳಿಗೂ ಅಂತಿಮ ನ್ಯಾಯ ಪೀಠವೂ ಇದಾಗಿದೆ. ಸರ್ವೋಚ್ಛ ನ್ಯಾಯಾಲಯವು ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ಪೀಠವಾಗಿ ಕಾರ್ಯನಿರ್ವಹಿಸಬೇಕಿತ್ತು. ಮೂಲ ಆಶಯದ ಪ್ರಕಾರ ಅಂತಿಮ ನ್ಯಾಯ ಪೀಠಕ್ಕೆ ಸಲ್ಲಿಸುವ ಮೇಲ್ವಿಚಾರಣೆಯ ಅರ್ಜಿಗಳು ವಿಶೇಷ ಸಂದರ್ಭಗಳಲ್ಲಿ ಕೊಡುವ ಅವಕಾಶ ಮಾತ್ರ. ಆದರೆ ಸಧ್ಯಕ್ಕೆ ಬಹುಪಾಲು ಅಧೀನ ನ್ಯಾಯಾಲಯಗಳು ಮತ್ತಿತರ ನ್ಯಾಯಮಂಡಳಿಗಳಿಂದ ಮೇಲ್ವಿಚಾರಣೆಗೆ ಬಂದಿರುವ ಮೊಕದ್ದಮೆಗಳ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಸಮಯ ಸವೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಕಾರ್ಯವಿಧಾನದ ಕುರಿತು ನಡೆಸಲಾದ ಒಂದು ಅಧ್ಯಯನವು ಇನ್ನಷ್ಟು ಅಂಶಗಳನ್ನು ಬೆಳಕಿಗೆ ತಂದಿದೆ. ಈ ಅಧ್ಯಯನದಲ್ಲಿ ಸರ್ವೋಚ್ಚ ನ್ಯಾಯಾಲಯದ ಕೆಲಸವನ್ನು ವಿಷಯಾಧಾರಿತವಾಗಿ ವರ್ಗೀಕರಿಸಿ ನೋಡಿದಾಗ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗೆ ನ್ಯಾಯಾಲಯದ ಅತಿಹೆಚ್ಚು ಸಮಯ ಹೋಗುತ್ತಿರುವುದು ಕಂಡುಬಂತು. ಸಿವಿಲ್ ಮೊಕದ್ದಮೆಗಳಲ್ಲಿ ಅತಿಹೆಚ್ಚು ಮೊಕದ್ದಮೆಗಳು ಸೇವೆಗೆ ಸಂಬಂಧಿಸಿದ ವಿಷಯಗಳನ್ನೇ (service matters) ಒಳಗೊಂಡಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನೂ ಸೇರಿದಂತೆ ಸಾಂವಿಧಾನಿಕ ವಿಷಯಗಳ ಕುರಿತ ಮೊಕದ್ದಮೆಗಳ ಪ್ರಮಾಣ ಶೇಕಡಾ 10ಕ್ಕಿಂತಲೂ ಕಡಿಮೆಯಿದೆ.
ಸರ್ವೋಚ್ಛ ನ್ಯಾಯಾಲಯವು ಪ್ರಮುಖ ಪ್ರಕರಣಗಳಲ್ಲಿ ಪಂಚಸದಸ್ಯರ ಪೀಠವನ್ನು ಸರಿಯಾಗಿ ನೇಮಿಸದೇ ಇರುವುದರಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದೆ. ಶೇಕಡಾ 90 ರಷ್ಟು ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ದ್ವಿಸದಸ್ಯ ಪೀಠಗಳನ್ನು ನೇಮಿಸಿರುವುದು ಕಂಡುಬಂದರೆ ಉಳಿದ ಪ್ರಕರಣಗಳಲ್ಲಿ ತ್ರಿಸದಸ್ಯ ಪೀಠಗಳ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಪಂಚಸದಸ್ಯರ ಪೀಠ ನೇಮಕವಾಗುವುದು ಕೆಲವೇ ಪ್ರಕರಣಗಳಲ್ಲಿ ಮಾತ್ರ. ಸರ್ಕಾರದ ಕ್ರಮಗಳನ್ನು ಅಥವಾ ಕಾನೂನುಗಳ ಸಾಂವಿಧಾನಿಕ ನೆಲೆಯನ್ನು ಪ್ರಶ್ನಿಸುವ ಮೊಕದ್ದಮೆಗಳಲ್ಲೂ ಹೆಚ್ಚಿನವನ್ನು ದ್ವಿಸದಸ್ಯ ಪೀಠಗಳೇ ನಿರ್ವಹಿಸಿವೆ. ಸಾರ್ವಜನಿಕ ಹಿತಾಸಕ್ತಿ ಹೊಂದಿದ ಮೊಕದ್ದಮೆಗಳಲ್ಲೂ ಶೇಕಡಾ 71 ರಷ್ಟು ದ್ವಿಸದಸ್ಯ ಪೀಠಗಳಲ್ಲೇ ವಿಚಾರಣೆಗೆ ಒಳಪಟ್ಟಿವೆ.
ಸರ್ವೋಚ್ಛ ನ್ಯಾಯಾಲಯಕ್ಕೆ ಹತ್ತಿರದಲ್ಲಿ ಇರುವುದಕ್ಕೂ, ಮೊಕದ್ದಮೆಗಳ ಹೂಡುವ ಸಾಧ್ಯತೆಗೂ ಸಂಬಂಧವಿರುವುದು ಈ ಅಧ್ಯಯನದಲ್ಲಿ ಕಂಡುಬಂದ ಮತ್ತೊಂದು ಪ್ರಮುಖ ಅಂಶ. ಈ ನಿಟ್ಟಿನಲ್ಲಿ ಪಂಜಾಬ್ ಮತ್ತು ಹರ್ಯಾಣದ ಉಚ್ಚ ನ್ಯಾಯಾಲಯದಿಂದ ಅತಿಹೆಚ್ಚು ಪ್ರಕರಣಗಳು ಮೇಲ್ವಿಚಾರಣೆಗೆ ಬಂದಿರುವುದೂ , ಪೂರ್ವೋತ್ತರ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಂದ ಯಾವುದೇ ಪ್ರಕರಣಗಳೂ ಬಂದಿಲ್ಲದೇ ಇರುವುದು ಅಚ್ಚರಿಯೇನಲ್ಲ. ದ್ವಿಸದಸ್ಯ ಪೀಠಗಳ ಎದುರು ಬರುವ ಶೇಕಡಾ 90 ರಷ್ಟು ಮೊಕದ್ದಮೆಗಳು ಇವುಗಳೇ ಆಗಿವೆ. ಸರ್ವೋಚ್ಛ ನ್ಯಾಯಾಲಯದ ವ್ಯಾಪ್ತಿಗೆ ಬರುವ ವಿಷಯಗಳಿಗೆ ಮೀಸಲಾಗಿ ಪಂಚಸದಸ್ಯ ಪೀಠಗಳು ಕಾರ್ಯನಿರ್ವಹಿಸಿವೆ. ದೆಹಲಿಯ ಸುತ್ತಮುತ್ತಲ ಪ್ರದೇಶಗಳಿಂದಲೇ ಅತಿಹೆಚ್ಚು ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳಿರುತ್ತವೆ ಎಂಬ ಮಾತನ್ನು ಮತ್ತೊಂದು ಅಧ್ಯಯನ ಧೃಢೀಕರಿಸುತ್ತದೆ. 2011ರ ಅಂಕಿ ಅಂಶಗಳ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅತಿ ಹತ್ತಿರದಲ್ಲಿರುವ ಉಚ್ಚ ನ್ಯಾಯಾಲಯಗಳಿಂದಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ರಾಜ್ಯಗಳು ದೇಶದ ಜನಸಂಖ್ಯೆಯಲ್ಲಿ ಶೇಕಡಾ 7.2 ಜನರನ್ನು ಮಾತ್ರ ಹೊಂದಿದ್ದರೂ ಒಟ್ಟು ಮೇಲ್ವಿಚಾರಣೆಯ ಪ್ರಕರಣಗಳಲ್ಲಿ ಶೇಕಡಾ 31.4 ರಷ್ಟು ಪಾಲನ್ನು ಹೊಂದಿವೆ. ಅಲ್ಲದೆ ಸರ್ವೋಚ್ಛ ನ್ಯಾಯಾಲಯಗಳನ್ನು ತಲುಪಬಲ್ಲ (ಸರ್ಕಾರದಂತಹ) ಸಂಸ್ಥೆಗಳೂ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ. ಹಿರಿಯ ವಕೀಲರ ಸಂಭಾವನೆಯೂ ಪ್ರಕರಣದ ಒಟ್ಟಾರೆ ಖರ್ಚಿನ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಾರ್ವಜನಿಕರು ಸರ್ವೋಚ್ಛ ನ್ಯಾಯಾಲಯದ ಬಗ್ಗೆ ಹೊಂದಿರುವ ಪರಿಕಲ್ಪನೆಯೂ ಹೆಚ್ಚುತ್ತಿರುವ ಪ್ರಕರಣಗಳ ಸಮಸ್ಯೆಗೆ ಕಾರಣವಾಗಿದೆ. ಸರ್ವೋಚ್ಚ ನ್ಯಾಯಾಲಯವನ್ನು ಜನರು ಪ್ರಾದೇಶಿಕ ಪ್ರಭಾವಶಾಲಿ ವ್ಯಕ್ತಿಗಳ ಮೈತ್ರಿಯಿಂದ ದೂರವಿರುವ, ಭ್ರಷ್ಟಗೊಳಿಸಲಾಗದ ಸಂಸ್ಥೆಯಂತೆ ಕಾಣುತ್ತಾರೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ನ್ಯಾಯಾಲಯಗಳ ಮೇಲೆ ಅಪನಂಬಿಕೆ ಹೊಂದಿರುವ ಜನರು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಎಲ್ಲಾ ಅಧೀನ ನ್ಯಾಯಾಲಯಗಳನ್ನು ಶಿಸ್ತಿನಿಂದ ಇರಿಸಲು ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳುವಂತೆ ಮಾಡಲು ಸಾಧ್ಯ ಎಂದು ಬಗೆದಿದ್ದಾರೆ. ಹಾಗಾಗಿಯೇ ಮೇಲ್ವಿಚಾರಣೆಯ ಅರ್ಜಿಗಳು ಹೆಚ್ಚಿನ ಮಟ್ಟದಲ್ಲಿ ಸರ್ವೋಚ್ಛ ನ್ಯಾಯಾಲಯವನ್ನು ಸೇರಿವೆ. ಸರ್ವೋಚ್ಚ ನ್ಯಾಯಾಲಯದ ಮುಂದೆ ಎರಡು ರೀತಿಯ ಪ್ರಕರಣಗಳು ಬರುತ್ತವೆ: “ಅಡ್ಮಿಶನ್ ಮ್ಯಾಟರ್ಸ್” ಮತ್ತು “ಸಾಧಾರಣ ಪ್ರಕರಣಗಳು”. ಅಡ್ಮಿಶನ್ ಮ್ಯಾಟರ್ಸ್ ಅನ್ನುವುದು ಸರ್ವೋಚ್ಚ ನ್ಯಾಯಾಲಯವು ತನ್ನಿಚ್ಛೆಯಿಂದ ಸೇರಿಸಿಕೊಳ್ಳುವ ಸಾಧಾರಣ ಪ್ರಕರಣ ಅನ್ನಬಹುದು. ಇಂತಹ ಪ್ರಕರಣಗಳಿಗೆ ವಾರದಲ್ಲಿ ಎರಡು ದಿನ ಮೀಸಲಾಗಿ ಇಡಲಾಗುತ್ತದೆ. ಉಳಿದಂತೆ ಮೂರು ದಿನ ಸಾಧಾರಣ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ. ಕಾನೂನಿನ ಗಂಭೀರವಾದ ಪ್ರಶ್ನೆಗಳನ್ನು ಒಳಗೊಂಡ ವಿಷಯಗಳ ಕುರಿತಾಗಿ ತೀರ್ಪುಗಳ ನೀಡುವ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಉಳಿಯುವ ಸಮಯ ತೀರಾ ಕಡಿಮೆ ಎನ್ನಬಹುದು.
ಈ ಕಾರಣಗಳಿಗಾಗಿ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಮತ್ತು ಕಾನೂನು ವಿಷಯಗಳನ್ನು ಬೇರ್ಪಡಿಸಿ ಪ್ರಾದೇಶಿಕ ನ್ಯಾಯಪೀಠಗಳ ಮೂಲಕ ನಿರ್ವಹಿಸುವುದು ಉತ್ತಮ ಎಂದು ಸೂಚಿಸಲಾಗಿದೆ. ಸಾಂವಿಧಾನಿಕ ವಿಷಯಗಳ ಪೀಠವನ್ನು ದೆಹಲಿಯಲ್ಲಿ ನೆಲೆಸಿ ಸಾಂವಿಧಾನಿಕ ವಿಷಯಗಳ ಪ್ರಕರಣಗಳನ್ನು ಅಲ್ಲಿ ನಡೆಸಿ, ಉಳಿದ ವಿಷಯಗಳನ್ನು ಆಯಾ ಪ್ರದೇಶದ ನ್ಯಾಯಪೀಠಗಳಲ್ಲಿಯೂ ನಡೆಸಬಹುದಾಗಿದೆ. ಭಾರತೀಯ ಕಾನೂನು ಆಯೋಗವು ಹಲವು ಬಾರಿ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠಗಳನ್ನು ರೂಪಿಸಲು ಕರೆ ನೀಡಿದೆ. 1968ರಲ್ಲಿ 95ನೇ ಕಾನೂನು ಆಯೋಗದ ವರದಿಯಲ್ಲಿ (i) ಸಾಂವಿಧಾನಿಕ ಪೀಠ ಮತ್ತು (ii) ಕಾನೂನು ಪೀಠ ಎಂಬ ಎರಡು ವಿಭಾಗಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಪೀಠದ ಸ್ಥಾಪನೆಯ ಕುರಿತು ಪ್ರಸ್ತಾಪಿಸಲಾಗಿದೆ. ಅಲ್ಲದೆ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯಕ್ಕೆ ನೇಮಕವಾದಂತೆ ಬಹು ಬೇಗನೆ ಅವರನ್ನು ಸೂಕ್ತ ಪೀಠಕ್ಕೆ ನಿಯೋಜಿಸಲು ಸೂಚಿಸಲಾಗಿದೆ. ನಂತರ 1988ರಲ್ಲಿ 125ನೇ ಕಾನೂನು ಆಯೋಗದ ವರದಿಯಲ್ಲಿ 95ನೇ ಕಾನೂನು ಆಯೋಗದ ವರದಿಯ ಅಂಶಗಳನ್ನೇ ಪುನರುಚ್ಚರಿಸಲಾಯಿತು. ಸರ್ವೋಚ್ಚ ಕಾನೂನು ಪೀಠವನ್ನು ಎರಡು ವಿಭಾಗಗಳಾಗಿ ನಡೆಸಿದರೆ ಜನರಿಗೆ ಇನ್ನಷ್ಟು ಹತ್ತಿರವಾಗಬಹುದಲ್ಲದೆ ಒಟ್ಟಾರೆ ಖರ್ಚನ್ನೂ ತಗ್ಗಿಸಬಹುದು ಎಂಬ ನಂಬಿಕೆಯನ್ನು ಕಾನೂನು ಆಯೋಗ ಹೊಂದಿತ್ತು.
2009ರಲ್ಲಿ 18ನೇ ಕಾನೂನು ಆಯೋಗವು ಈ ಮೊದಲಿನ ಆಯೋಗಗಳ ಅನಿಸಿಕೆಯನ್ನೇ ಮಾರ್ದನಿಸುತ್ತಾ ದೇಶದಲ್ಲಿ ನಾಲ್ಕು ರದ್ದತಿಯ ಪೀಠಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತು. ದೆಹಲಿಯಲ್ಲಿ ಉತ್ತರ ವಿಭಾಗ, ಚೆನ್ನೈ/ಹೈದರಾಬಾದಿನಲ್ಲಿ ದಕ್ಷಿಣ ವಿಭಾಗ, ಕೋಲ್ಕತ್ತಾದಲ್ಲಿ ಪೂರ್ವ ವಿಭಾಗ ಮತ್ತು ಮುಂಬೈಯಲ್ಲಿ ಪಶ್ಚಿಮ ವಿಭಾಗದ ಪೀಠಗಳನ್ನು ಸ್ಥಾಪಿಸಲು ಸೂಚಿಸಿತು. ಆಯಾ ಪ್ರದೇಶದಲ್ಲಿ ಹೂಡುವ ತೀರ್ಪಿನ ರದ್ದತಿಯ ದಾವೆಗಳನ್ನು ಬಗೆಹರಿಸುವುದು ಆಯಾ ಪೀಠಗಳ ಕೆಲಸ ಎಂದು ಹೇಳಲಾಯಿತು. ಅಲ್ಲದೆ ದೆಹಲಿಯಲ್ಲಿ ಸಾಂವಿಧಾನಿಕ ಪೀಠವನ್ನು ನೆಲೆಗೊಳಿಸಿ ಅದನ್ನು ಸಾಂವಿಧಾನಿಕ ಅಥವಾ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಮೀಸಲಾಗಿಡುವ ಬಗ್ಗೆಯೂ ಕಾನೂನು ಆಯೋಗ ಶಿಫಾರಸ್ಸು ಮಾಡಿತು. ಇದರಿಂದ ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಗೆ ವೇಗ ತುಂಬಬಹುದು ಮತ್ತು ಸರ್ವೋಚ್ಚ ನ್ಯಾಯಾಲಯದ ಸಮಯವನ್ನು ಹೆಚ್ಚಾಗಿ ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ ಹೊಂದಿರುವ ಸಾಂವಿಧಾನಿಕ ವಿಷಯಗಳ ಕಡೆಗೆ ಹರಿಸಬಹುದು. ಇದರ ಮತ್ತೊಂದು ಆಶಯವೆಂದರೆ ದೆಹಲಿಯಿಂದ ದೂರದ ಪ್ರದೇಶಗಳಲ್ಲಿರುವ ಜನರಿಗೂ ಸರ್ವೋಚ್ಚ ನ್ಯಾಯಾಲಯಕ್ಕೂ ಇರುವ ಅಂತರವನ್ನು ಕಡಿಮೆ ಮಾಡುವ ಮೂಲಕ ನ್ಯಾಯ ಪಡೆಯುವ ಸಾಂವಿಧಾನಿಕ ಹಕ್ಕನ್ನು ಅವರು ಸುಲಭವಾಗಿ ಪಡೆಯುವಂತೆ ಮಾಡುವುದು. 2019ರಲ್ಲಿ ಭಾರತದ ಉಪರಾಷ್ಟ್ರಪತಿಗಳಾಗಿದ್ದ ವೆಂಕಯ್ಯ ನಾಯ್ಡು ಅವರು ಪ್ರಾದೇಶಿಕ ನ್ಯಾಯ ಪೀಠಗಳ ಸ್ಥಾಪನೆಯಿಂದ ಕಾನೂನು ವ್ಯವಸ್ಥೆ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದು ಪ್ರತಿಪಾದಿಸಿದ್ದರು. ಹೀಗೆ ಮಾಡುವುದರಿಂದ ದಾವೆದಾರರು ಪ್ರತಿಬಾರಿಯೂ ದೆಹಲಿಗೆ ಪ್ರಯಾಣಕ್ಕೆ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ, ಕಾನೂನು ವ್ಯವಸ್ಥೆ ಜನರ ಕೈಗೆಟಕುತ್ತದೆ. ಜನರಿಗೆ ಕಾನೂನು ವ್ಯವಸ್ಥೆ ಸುಲಭವಾಗಿ ದೊರೆಯುವಂತೆ ಮಾಡುವುದು ಎರಡು ಅಲುಗಿನ ಕತ್ತಿ ಅಂತಲೇ ಹೇಳಬಹುದು, ಏಕೆಂದರೆ ಪ್ರಾದೇಶಿಕ ಪೀಠಗಳ ಸ್ಥಾಪನೆಯಿಂದ ಪ್ರಕರಣಗಳೇನೋ ಬೇಗ ಮುಗಿಯಬಹುದು ಆದರೆ ಹಾಗೆಯೇ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಬಹುದು. ಈ ಉದಾಹರಣೆಯನ್ನೇ ತೆಗೆದುಕೊಂಡರೆ, ಒಂದು ಅಧ್ಯಯನದ ಪ್ರಕಾರ ಜಗತ್ತಿನಲ್ಲೇ ಅತ್ಯಂತ ಸುಲಭವಾಗಿ ಲಭ್ಯ ಕಾನೂನು ವ್ಯವಸ್ಥೆಗಳಲ್ಲಿ ಒಂದು ಎನ್ನಲ್ಪಡುವ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು ಪ್ರವಾಹದಂತೆ ಹರಿದು ಬರಲು ಕಾರಣ ಅದು ಸುಲಭವಾಗಿ ತಲುಪಬಹುದಾಗಿರುವುದೇ ಆಗಿದೆ. ಇನ್ನು ಪ್ರಾದೇಶಿಕ ಪೀಠಗಳು ನೆಲೆಕಂಡರೆ ಮತ್ತೊಂದು ಪ್ರಕರಣಗಳ ಪ್ರವಾಹವನ್ನು ತಡೆಯಲು ಆಗುವುದಿಲ್ಲ. ಹೆಚ್ಚಿದ ಪ್ರಕರಣಗಳಿಂದ ಬಾಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಿರುವ ಸಮಸ್ಯೆ ಉಲ್ಬಣವೂ ಆಗಬಹುದು.
ಹೆಚ್ಚಿದ ಪ್ರಕರಣಗಳಿಂದ ಅತಿಯಾದ ಕೆಲಸದ ಹೊರೆ ಮತ್ತು ಬಾಕಿ ಪ್ರಕರಣಗಳ ಸಮಸ್ಯೆಯಿಂದ ಬಳಲುತ್ತಿರುವ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾಡುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ತನ್ನ ತೀರ್ಪುಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಆಗದೆ ಇರುವುದು. ದೇಶದ ಅತ್ಯುನ್ನತ ಕಾನೂನಿನ ಪೀಠವಾಗಿರುವ ಕಾರಣದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ನಿರ್ದಿಷ್ಟವಾದ ಪ್ರಕರಣಗಳಲ್ಲಿ ಸ್ಪಷ್ಟತೆ ನೀಡುವಂತಹ ತೀರ್ಪುಗಳನ್ನು ನೀಡಬೇಕಾದ ಹೊಣೆಗಾರಿಕೆ ಇರುತ್ತದೆ. ಆದರೆ ಈ ಮೊದಲೇ ತಿಳಿಸಿದಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಬರುವ ಬಹುತೇಕ ಪ್ರಕರಣಗಳನ್ನು ದ್ವಿಸದಸ್ಯ ಇಲ್ಲವೇ ತ್ರಿಸದಸ್ಯ ಪೀಠಗಳೇ ನಿಭಾಯಿಸುತ್ತವೆ. ಈ ಕುರಿತು ನಡೆಸಲಾದ ಅಧ್ಯಯನ ಒಂದರಲ್ಲಿ ವರದಿಮಾಡಿದಂತೆ ಸರ್ವೋಚ್ಚ ನ್ಯಾಯಾಲಯಗಳಲ್ಲಿ ನೀಡುತ್ತಾ ಬಂದಿರುವ ತೀರ್ಪುಗಳ ಗುಣಮಟ್ಟ ಉತ್ತಮವಾಗಿಲ್ಲದೆ ಹಲವಾರು ಪೂರ್ವನಿದರ್ಶನಗಳನ್ನು ಸರಿಯಾಗಿ ವಿಶ್ಲೇಷಿಸದೇ ನೀಡಿದ ಹಾಗಿದೆ. ಇದರಿಂದ ಮುಂಬರುವ ಪ್ರಕರಣಗಳಲ್ಲಿ ವಿರುದ್ಧ ನಿಲುವಿನ ತೀರ್ಪುಗಳು ಕೊಡಲಾಗಿ ಇನ್ನಷ್ಟು ಗೊಂದಲಗಳು ಉಂಟಾಗುತ್ತಿವೆ. ಇನ್ನು ಬೇರೆ ಕೆಲವು ವ್ಯಾಪ್ತಿಯ ಪ್ರಕರಣಗಳಲ್ಲಿ ವಕೀಲರು ತಮಗೆ ತಿಳಿದಿರುವ ಹಳೆಯ ನಿದರ್ಶನಗಳ ಸಹಾಯದಿಂದ ತಮ್ಮ ಕಕ್ಷಿದಾರರಿಗೆ ಗೆಲುವಿನ ಸಾಧ್ಯತೆಯ ಬಗ್ಗೆ ಸೂಕ್ತ ಸಲಹೆ ನೀಡಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನೀಡುತ್ತಿರುವ ತೀರ್ಪಿನ ವಿರುದ್ಧ ನಿಲುವಿನ ಗೊಂದಲಗಳಿಂದಲೇ ಹೆಚ್ಚು ಮಂದಿ ನ್ಯಾಯಾಲಯದ ಹೊರಗೇ ಬಗೆಹರಿಸಿಕೊಳ್ಳದೇ ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ. ಇದೊಂದು ವಿಷವೃತ್ತದ ಹಾಗಿದೆ ಎನ್ನುತ್ತಾರೆ ಇದರ ಅಧ್ಯಯನಕಾರರು: ನ್ಯಾಯಾಲಯದಲ್ಲಿ ಭಾರೀ ಪ್ರಮಾಣದ ಬಾಕಿ ಪ್ರಕರಣಗಳು ಉಳಿದಿರುವುದರಿಂದ ಪ್ರತಿಯೊಂದು ಪ್ರಕರಣಕ್ಕೂ ಸಾಕಷ್ಟು ಸಮಯ ನೀಡಿ ವಿಶ್ಲೇಷಿಸಿ ಸರಿಯಾದ ತೀರ್ಪು ನೀಡಲು ಆಗುತ್ತಿಲ್ಲ. ಇದರಿಂದ ಇನ್ನಷ್ಟು ಜನರು ನ್ಯಾಯಾಲಯದ ಮೆಟ್ಟಿಲು ಏರುವಂತಾಗಿ ಮೊಕದ್ದಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಪ್ರಾದೇಶಿಕ ನ್ಯಾಯಪೀಠಗಳೂ ಸೇರಿದರೆ ಈ ಸಮಸ್ಯೆ ಇನ್ನಷ್ಟು ದೊಡ್ಡದಾಗಬಹುದು. ಹೆಚ್ಚೆಚ್ಚು ನ್ಯಾಯಪೀಠಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬರುತ್ತಿದ್ದಂತೆಯೇ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿ ಮುಂದೆ ಬರಬಹುದಾದ ಊಹಿಸಲಾಗದ ಸಮಸ್ಯೆಗಳ ನಿರ್ವಹಣೆಗೆ ಮತ್ತೊಂದು ಕಾನೂನಿನ ಅಂಗ ಬೇಕಾಗಬಹುದು.
2010ರಲ್ಲೇ ಸರ್ವೋಚ್ಚ ನ್ಯಾಯಾಲಯವು ಪ್ರಾದೇಶಿಕ ನ್ಯಾಯಪೀಠಗಳ ಕೋರಿಕೆಯನ್ನು ತಿರಸ್ಕರಿಸಿದ್ದು, ಇದರಿಂದ ದೇಶದ ಏಕತೆಯ ಸ್ವರೂಪಕ್ಕೆ ಧಕ್ಕೆ ಆಗಲಿದೆ ಅನ್ನುವುದು ಅದರ ನಿಲುವಾಗಿತ್ತು. ಪ್ರಾದೇಶಿಕ ನ್ಯಾಯಪೀಠಗಳ ಪರಿಕಲ್ಪನೆ ಬೇರೆಲ್ಲ ಅಪೂರ್ವ ಚಿಂತನೆಗಳಂತೆ ಅದ್ಭುತವಾಗಿ ಕಂಡರೂ ಅದರಿಂದ ಅನುಕೂಲದಷ್ಟೇ ತೊಂದರೆಗಳೂ ಇರುವುದು ಕಾಣುತ್ತದೆ. ಈ ಎಲ್ಲ ಒಳಿತು-ಕೆಡಕುಗಳ ಅಳೆದು ತೂಗಿ ಸರ್ವೋಚ್ಚ ನ್ಯಾಯಾಲಯವು ತನ್ನ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಯ ಹೊರೆಯನ್ನು ಸಮರ್ಥವಾಗಿ ನಿಭಾಯಿಸಲು ಸೂಕ್ತ ಕ್ರಮ ಆದಷ್ಟು ಬೇಗ ಕೈಗೊಳ್ಳಬೇಕು.
(ಪೂಜಾ ಮೂರ್ತಿ ಅವರು ದಕ್ಷ್ ಸಂಸ್ಥೆಯಲ್ಲಿ ಸಲಹಾಕಾರರಾಗಿದ್ದರು.)
[1] ರಾಬಿನ್ಸನ್ ಎನ್, 2013. ಸ್ಟ್ರಕ್ಚರ್ ಮ್ಯಾಟರ್ಸ್ : ದಿ ಇಂಪ್ಯಾಕ್ಟ್ ಆಫ್ ಕೋರ್ಟ್ ಸ್ಟ್ರಕ್ಚರ್ ಆನ್ ದಿ ಇಂಡಿಯನ್ ಅಂಡ್ ಯುಎಸ್ ಸುಪ್ರೀಂ ಕೋರ್ಟ್ಸ್. ದಿ ಅಮೆರಿಕನ್ ಜರ್ನಲ್ ಆ ಕಂಪರೇಟಿವ್ ಲಾ, 61(1), ಪುಟ 173-208.
[2] ಹೇಮರಂಜನೀ ಆರ್ ಮತ್ತು ಅಗರ್ವಾಲ್ ಹೆಚ್, 2019. ಎ ಟೆಂಪೊರಲ್ ಅನಾಲಿಸಿಸ್ ಆಫ್ ದಿ ಸುಪ್ರೀಂ ಕೋರ್ಟ್ ಆಫ್ ಇಂಡಿಯಾಸ್ ವರ್ಕ್ ಲೋಡ್. ಇಂಡಿಯನ್ ಲಾ ರಿವ್ಯೂ, 3(2). ಪುಟ 125-158.
[3] ಭಾರತೀಯ ಸಂವಿಧಾನದ 136ನೇ ವಿಧಿ
[4] ಖೈತಾನ್, ತರುನಬ್ “ದಿ ಸುಪ್ರೀಂ ಕೋರ್ಟ್ ಅಸ್ ಎ ಕಾನ್ಸ್ಟಿಟ್ಯೂಷನಲ್ ವಾಚ್ ಡಾಗ್” ಇನ್ ತರುಣಬ್ ಖೈತಾನ್, ‘ದಿ ಸುಪ್ರೀಂ ಕೋರ್ಟ್ ಅಸ್ ಎ ಕಾನ್ಸ್ಟಿಟ್ಯೂಷನಲ್ ವಾಚ್ ಡಾಗ್ (2019)’ 721 ಸೆಮಿನಾರ್ ಪುಟ 22-28, 2019.
[5] ಚಂದ್ರ, ಅಪರ್ಣ, ವಿಲಿಯಂ ಹೆಚ್ ಜೆ ಹುಬ್ಬರ್ಡ್ ಮತ್ತು ಶೀತಲ್ ಕಾಲಾಂತರಿ. “ದಿ ಸುಪ್ರೀಂ ಕೋರ್ಟ್ ಆ ಇಂಡಿಯಾ: ಎನ್ ಇಂಪೆರಿಕಾಲ್ ಓವೆರ್ವ್ಯೂ”. ಫೋರ್ಥ್ ಕಮಿಂಗ್ ಇನ್ ರೋಸೆನ್ಬರ್ಗ್, ಗೆರಾಲ್ಡ್ ಎನ್ ಸುಧೀರ್ ಕೃಷ್ಣಸ್ವಾಮಿ ಮತ್ತು ಶಿಶಿರ್ ಬೇಯಿಲ್. ದಿ ಇಂಡಿಯನ್ ಸುಪ್ರೀಂ ಕೋರ್ಟ್ ಅಂಡ್ ಪ್ರೋಗ್ರೆಸಿವ್ ಸೋಶಿಯಲ್ ಚೇಂಜ್ (ಕೇಂಬ್ರಿಜ್, 2019) (2018)
[6] ಮತ್ತದೇ
[7] 6 ರಲ್ಲಿ ತಿಳಿಸಿದಂತೆ
[8] 2 ರಲ್ಲಿ ತಿಳಿಸಿದಂತೆ
[9] ಮಿಶ್ರ ಎಸ್ 2017. ರೀಜನಲ್ ಬೆಂಚಸ್ ಆಫ್ ದಿ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ – ದಿ ಪಥ ಅಹೆಡ್. ಕ್ರೈಸ್ಟ್ ಯೂನಿವರ್ಸಿಟಿ ಲಾ ಜರ್ನಲ್, 6(1) ಪುಟ 57-74.
[10] 2 ರಲ್ಲಿ ತಿಳಿಸಿದಂತೆ
[11] ಮತ್ತದೇ
[12] https://www.hindustantimes.com/columns/the-supreme-court-does-not-need-more-judges/story-GuWVG6vKXYP02aq3QGtC6N.html (ನವೆಂಬರ್ 05, 2019 ರಂದು ಕಂಡಂತೆ)
[13] ೫ ರಲ್ಲಿ ತಿಳಿಸಿದಂತೆ. ಮತ್ತೊಂದು ಉಲ್ಲೇಖ https://pib.gov.in/newsite/PrintRelease.aspx?relid=192590 (ಅಕ್ಟೋಬರ್ 31, 2019 ರಂದು ಕಂಡಂತೆ).
[14] https://indianexpress.com/article/explained/idea-of-regional-sc-benches-and-divisions-of-the-top-court-6036692/ (ಅಕ್ಟೋಬರ್ 31, 2019 ರಂದು ಕಂಡಂತೆ).
[15]10ರಲ್ಲಿ ತಿಳಿಸಿದಂತೆ
[16] ಮತ್ತದೇ
[17] 229ನೇ ಭಾರತೀಯ ಕಾನೂನು ಆಯೋಗ, ನೀಡ್ ಫಾರ್ ಡಿವಿಷನ್ ಆಫ್ ದಿ ಸುಪ್ರೀಂ ಕೋರ್ಟ್ ಇಂಟು ಆ ಕಾನ್ಸ್ಟಿಟ್ಯೂಷನಲ್ ಬೆಂಚ್ ಅಟ್ ಡೆಲ್ಲಿ ಅಂಡ್ ಕ್ಯಾಸೇಷನ್ ಬೆಂಚಸ್ ಇನ್ ಫೋರ್ ರೀಜನ್ಸ್ ಅಟ್ ಡೆಲ್ಲಿ, ಚೆನ್ನೈ, ಹೈದೆರಾಬಾದ್, ಕೊಲ್ಕತ್ತಾ ಅಂಡ್ ಮುಂಬೈ (2009)
[18] ಮತ್ತದೇ. ಇನ್ನೊಂದು ಉಲ್ಲೇಖ: ಮಿಶ್ರ ಎಸ್ 2017. ರೀಜನಲ್ ಬೆಂಚಸ್ ಆಫ್ ದಿ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ – ದಿ ಪಾತ್ ಅಹೆಡ್, ಕ್ರೈಸ್ಟ್ ಯೂನಿವರ್ಸಿಟಿ ಲಾ ಜರ್ನಲ್, 6(1). ಪುಟ 57-74.
[19] https://pib.gov.in/newsite/PrintRelease.aspx?relid=192590 (ಅಕ್ಟೋಬರ್ 31, 2019 ರಂದು ಕಂಡಂತೆ).
[20] 2 ರಲ್ಲಿ ತಿಳಿಸಿದಂತೆ
[21] ಮತ್ತದೇ
[22] https://www.thehindu.com/news/national/Supreme-Court-again-says-lsquonorsquo-to-regional-Benches/article16815858.ece (ಅಕ್ಟೋಬರ್ 31, 2019 ರಂದು ಕಂಡಂತೆ).
Translated from “Regional Benches of the Supreme Court” (https://www.dakshindia.org/regional-benches-of-the-supreme-court/) by Vallish Kumar
© 2021 DAKSH India. All rights reserved
Powered by Oy Media Solutions
Designed by GGWP Design